ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಪುತ್ತೂರು ತಾಲೂಕುಗಳು ಧಾರ್ಮಿಕ, ಸಾಂಸ್ಕೃತಿಕ ಪ್ರಸಿದ್ಧಿಯನ್ನು ಹೊಂದಿವೆ.
ಬಂಟ್ವಾಳ ತಾಲೂಕಿನ ನಡುವೆ ನೇತ್ರಾವತಿ, ಅಂಚಿನಲ್ಲಿ ಫಲ್ಗುಣಿ ಹರಿಯುತ್ತಾಳೆ. ಹಾಗಾಗಿ ಕೃಷಿ, ತೋಟಗಾರಿಕೆಯಲ್ಲಿ ಸಮೃದ್ಧವಾಗಿದೆ ಬಂಟ್ವಾಳ.
ಬಂಟ್ವಾಳದಿಂದ 10 ಕಿ.ಮೀ., ಮಂಗಳೂರಿನಿಂದ 20 ಕಿ.ಮೀ. ಅಂತರದ ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪುರಾಣ ಇತಿಹಾಸ ಪ್ರಸಿದ್ಧ .
ಪುತ್ತೂರು ತಾಲೂಕು
ಸಾಂಸ್ಕೃತಿಕವಾಗಿ ವಿಶೇಷ ಪರಂಪರೆಗಳನ್ನು ಹೊಂದಿರುವ ಪುತ್ತೂರು ಸಮುದ್ರ ಮಟ್ಟದಿಂದ 400 ಅಡಿ ಎತ್ತರವಿರುವ ನಿಸರ್ಗ ಸೌಂದರ್ಯದ ತಾಣ. ನೇತ್ರಾವತಿ - ಕುಮಾರಧಾರಾ ನದಿಗಳು ಸಂಗಮಿಸುವ ಉಪ್ಪಿನಂಗಡಿಯು (ಪುತ್ತೂರಿನಿಂದ 12 ಕಿ.ಮೀ.) ಗಯಾಪದ ಕ್ಷೇತ್ರ, ದಕ್ಷಿಣ ಕಾಶಿ ಎಂಬ ಪೌರಾಣಿಕ ವರ್ಣನೆಯನ್ನು ಹೊಂದಿದೆ.

ತುಳುನಾಡಿನ ವೀರ ಪುರುಷರಾಗಿರುವ ಅವಳಿ ಸಹೋದರರಾದ ಕೋಟಿ - ಚೆನ್ನಯರು ಜನಿಸಿದ ಪಡುಮಲೆಯು ಪುತ್ತೂರಿನಿಂದ 25 ಕಿ.ಮೀ. ಅಂತರದಲ್ಲಿದೆ. ಕರಾವಳಿಯುದ್ದಕ್ಕೂ ಅವರನ್ನು ಗರಡಿಗಳಲ್ಲಿ ಆರಾಧಿಸಿಕೊಂಡು ಬರಲಾಗುತ್ತಿದೆ. ಅವರು ಸಾಹಸ ಮೆರೆದ ಕಥಾನಕದ ಎಲ್ಲಾ ಕೇಂದ್ರಗಳೂ ತಾಲೂಕಿನಾದ್ಯಂತ ಈಗಲೂ ಇವೆ.
ಪುತ್ತೂರು ಪೇಟೆಯಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಬಿರುಮಲೆ ಬೆಟ್ಟ , ಶಿವರಾಮ ಕಾರಂತರ ಪ್ರಯೋಗ ರಂಗವಾಗಿದ್ದ ಬಾಲವನ ಇಲ್ಲಿದೆ. ದಕ್ಷಿಣ ಭಾರತದ ಏಕೈಕ ಬಿಸಿ ನೀರಿನ ಚಿಲುಮೆ "ಬೆಂದ್ರ್ತೀರ್ಥ' ತಾಲೂಕಿನ ಇರ್ದೆ ಗ್ರಾಮದಲ್ಲಿದೆ. ಈ ಅಪೂರ್ವ ತಾಣವನ್ನು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷಿಸಿರುವುದರಿಂದ ಪ್ರವಾಸಿಗರಿಗೆ ಅನಾನುಕೂಲವಾಗಿದೆ.
No comments:
Post a Comment