ಬೆಂಗಳೂರು ಸುತ್ತಮುತ್ತ ಇರುವ ಪ್ರವಾಸಿ ತಾಣಗಳ ಬಗೆಗೆ ಕಿರು ಪರಿಚಯ. ಒಂದು ದಿನದ ಪಿಕ್ನಿಕ್ಕಿಗೆ ದಾರಿದೀಪ.
ಬನ್ನೇರುಘಟ್ಟ : ಬೆಂಗಳೂರಿನಿಂದ ದಕ್ಷಿಣಕ್ಕೆ ಸುಮಾರು 22 ಕಿಮೀ. 25,000 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಹಸುರು ಆಚ್ಛಾದಿತ ಪ್ರಾಣಿ ಸಂಗ್ರಹಾಲಯ. ಚಿಟ್ಟೆಗಳ ಪಾರ್ಕ್ ಇತ್ತೀಚಿನ ಆಕರ್ಷಣೆ. ದಟ್ಟ ಕಾಡು, ವನ್ಯಜೀವಿಗಳ ವಿಹಾರಧಾಮ. ಕಾಡುಕೋಣ, ಚಿರತೆ, ಮುಳ್ಳುಹಂದಿ ಮುಂತಾದ ಪ್ರಾಣಿಗಳಿಗೆ ಆಶ್ರಯಧಾಮ. ಪೂರ್ವ ಮತ್ತು ಪಶ್ಚಿಮ ಘಟ್ಟದ ನಡುವೆ ಓಡಾಡುವ ಆನೆಗಳ ಕಾರಿಡಾರ್. ಬೆಂಗಳೂರು ಕೇಂದ್ರ ಬಸ್ ನಿಲ್ಧಾಣದಿಂದ ವೋಲ್ವೋ ಬಸ್ಸಿದೆ.
ಮಾರ್ಗದರ್ಶನ...»
ಭೀಮೇಶ್ವರಿ : ಶಿವನಸಮುದ್ರ ಮತ್ತು ಮೇಕೆದಾಟು ಜಲಧಾರೆ ನಡುವೆ ಇರುವ ಸಣ್ಣ ಊರು ಭೀಮೇಶ್ವರಿ. ಮಂಡ್ಯ ಜಿಲ್ಲೆಯಲ್ಲಿ ಬರುವ ಭೀಮೇಶ್ವರಿ ಕಾವೇರಿ ನದಿಯ ರಮಣೀಯ ಬಿಂದು. ಸುಂದರ ಪ್ರಕೃತಿ ಪರಿಸರದ ನಡುವೆ ಹವ್ಯಾಸಿ ಮೀನುಗಾರಿಕೆಗೆ ಹೇಳಿ ಮಾಡಿಸಿದ ಸ್ಥಳ. ಪರಿಸರ ಪ್ರವಾಸಕ್ಕೆ ಹೆಸರುವಾಸಿ. ಮಹಸೀರ್ ಮೀನುಗಳ ಆಡುಂಬೊಲ.
ಮಾರ್ಗದರ್ಶನ...»
ಚೆನ್ನಕೇಶವ ದೇವಸ್ಥಾನ, ಕೈದಾಳ : ಜಕಣಾಚಾರಿಯ ಶಿಲ್ಪ ವೈಭವದಿಂದ ಕಂಗೊಳಿಸುವ ದೇವಾಲಯ ತುಮಕೂರಿನಿಂದ ಕೇವಲ 9 ಕಿಮೀ ದೂರ. ಕುಣಿಗಲ್ ರಸ್ತೆಯಲ್ಲಿರುವ ಗೂಳೂರು ಗ್ರಾಮದ ಒಳದಾರಿಯಲ್ಲಿ ನುಸುಳಿದರೆ ಸಿಗುತ್ತದೆ. ಸಣ್ಣ ದ್ರಾವಿಡ ಶೈಲಿಯ ಮೋಹಕ ಕೆತ್ತನೆಗಳು ಇಲ್ಲಿನ ವಿಶೇಷ. 1150ರಲ್ಲಿ ನಿರ್ಮಿಸಿದ ಕೈದಾಳ ಚೆನ್ನಕೇಶವನ ತಾಣವೇ ಜಕಣಾಚಾರಿಯ ಊರು. ಅವನು ಹುಟ್ಟಿ ಬೆಳೆದದ್ದು ಇಲ್ಲೇ.
ಮಾರ್ಗದರ್ಶನ...»
ದೇವರಾಯನ ದುರ್ಗ : ರಾಶಿರಾಶಿ ಶಿಲೆಗಳ ನಡುವೆ ಮೈವೆತ್ತ ಗಿರಿಧಾಮ. ಸಮುದ್ರ ಮಟ್ಟದಿಂದ 3940 ಅಡಿ ಎತ್ತರದಲ್ಲಿರುವ ರಮಣೀಯ ಪ್ರದೇಶ. ಬೆಂಗಳೂರಿನಿಂದ 65 ಕಿಮೀ, ತುಮಕೂರಿನಿಂದ 9 ಕಿಮೀ ದೂರದಲ್ಲಿದೆ. ಬೆಟ್ಟ ಹತ್ತುವವರಿಗೆ, ಚಾರಣಿಗರಿಗೆ, ಪ್ರಕೃತಿ ಆರಾಧಕರಿಗೆ, ದೈವಭಕ್ತರಿಗೆ ಹಾಗೆ ಸುಮ್ಮನೆ ಹೊರ ಸಂಚಾರ ತೆರಳುವವರಿಗೆ, ಒತ್ತಡ ಜೀವನ ಶೈಲಿಯಿಂದ ಒಂದು ದಿನದ ಬಿಡುಗಡೆ ಪಡೆಯಬಯಸುವವರಿಗೆ ದೇವರಾಯನದುರ್ಗ ಹೇಳಿ ಮಾಡಿಸಿದ ತಾಣ. ಗ್ಯಾಲರಿಗೆ ಇಲ್ಲಿ ಕ್ಲಿಕ್ಕಿಸಿ.
ಮಾರ್ಗದರ್ಶನ...»
ಜಯಮಂಗಲಿ : ವರ್ಷಗಟ್ಟಳೆಯಿಂದ ಬೆಂಗಳೂರಿನಲ್ಲೇ ಜೀವನ ಸಾಗಿಸುತ್ತಿದ್ದರೂ ಎಷ್ಟೋ ಜನರಿಗೆ ನಗರದ ಸುತ್ತಮುತ್ತಲಿರುವ ಪ್ರಾಕೃತಿಕ ಸಂಪತ್ತಿನ ದರ್ಶನ ಮಾಡಲು ಗೊತ್ತಿಲ್ಲ ಅಥವಾ ಪುರುಸೊತ್ತಿಲ್ಲ ಅಥವಾ ಹಿತ್ತಲ ಗಿಡ ಮದ್ದಲ್ಲ! ಅಂಥ ಒಂದು ತಾಣ ಜಯಮಂಗಲಿ (ಹಳೆಯ ಹೆಸರು ಮೈದೇನಹಳ್ಳಿ). ಇದು ಕೃಷ್ಣಮೃಗಗಳಿಗೆ ಹೆಸರಾದ ಮಥುರಾ! ದಕ್ಷಿಣ ಭಾರತದಲ್ಲಿ ಸ್ಥಾಪಿತವಾಗಿರುವ ಏಕಮಾತ್ರ ಕೃಷ್ಣಮೃಗ ಸಂರಕ್ಷಿತ ತಾಣ. ಈ ತಾಣವಿರುವುದೂ ಕೂಡ ತುಮಕೂರು ಜಿಲ್ಲೆಯಲ್ಲೇ. ತುಮಕೂರು ಕಡೆಗೆ ಕಾರು ಚಲಿಸಿದರೆ ಏನೆಲ್ಲ ನೋಡಿಬರಬಹುದು.
ಮಾರ್ಗದರ್ಶನ...»
ನಾಮದ ಚಿಲುಮೆ : ದೇವರಾಯನ ದುರ್ಗಕ್ಕೆ ಚಲಿಸುವ ಹಾದಿಯಲ್ಲೇ ಸಿಗುವ ತಾಣ ನಾಮದ ಚಿಲುಮೆ. ದೇವರಾಯನ ದುರ್ಗದ ಬೆಟ್ಟದ ತಪ್ಪಲಿನಲ್ಲಿರುವ ಹಾದಿಯಲ್ಲಿ, ತುಮಕೂರು ರಸ್ತೆಯಲ್ಲಿ ಇದೆ. ಶ್ರೀರಾಮ ವನವಾಸಕ್ಕೆ ಹೊರಟಾಗ ಲಂಕೆಗೆ ಹೋಗುವ ಮಾರ್ಗಮಧ್ಯೆ ವಿಶ್ರಾಂತಿಗೆಂದು ಈ ಸ್ಥಳವನ್ನು ಆರಿಸಿಕೊಂಡನೆಂದು ಪ್ರತೀತಿ. ಶ್ರೀಗಂಧದ ತಿಲಕ ಅಥವಾ ನಾಮ ಅಥವಾ ಪುಂದ್ರಕ ಈ ಜಾಗದ ಹೆಸರಿನ ಮಹಿಮೆ.
ಮಾರ್ಗದರ್ಶನ...»
ಶಿವಗಂಗೆ : ತುಮಕೂರು ಜಿಲ್ಲೆಯಲ್ಲಿರುವ ಬೆಂಗಳೂರು ಬಳಿಯ ಮತ್ತೊಂದು ರಮ್ಯ ತಾಣ. ಬೆಂಗಳೂರಿನಿಂದ ಕೇವಲ 55 ಕಿ.ಮೀ. ದೂರದಲ್ಲಿ ಡಾಬಸ್ ಪೇಟೆ ಬಳಿ ಎಡಕ್ಕೆ ತಿರುಗಿದರೆ ನಾಲ್ಕು ಕಿ.ಮೀ.ದೂರದಲ್ಲಿ ಬೆಟ್ಟ ಕಾಣುತ್ತದೆ. ದಕ್ಷಿಣ ಕಾಶಿ ಎಂದೂ ಹೆಸರಾಗಿರುವ ಹಿಂದೂಗಳ ಪವಿತ್ರ ಕ್ಷೇತ್ರ ಚಾರಣಿಗರಿಗೆ, ಸಾಹಸಿಗರಿಗೆ ನಿಜಕ್ಕೂ ಸವಾಲೊಡ್ಡುತ್ತದೆ. ದೂರದಿಂದ ಶಿವಲಿಂಗದಂತೆ ಕಾಣುವ ಬೆಟ್ಟವನ್ನು ಒಮ್ಮೆಯಾದರೂ ಹತ್ತಿ ನೋಡಿ. ಮತ್ತೆ ಕಸುವಿದ್ದವರು ಮಾತ್ರ ಹತ್ತಲು ಪ್ರಯತ್ನಿಸಿ.
ಮಾರ್ಗದರ್ಶನ...»
ಮಲೆಮಹದೇಶ್ವರ ಬೆಟ್ಟ : ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಈ ಬೆಟ್ಟ ಕಾಡುಗಳ್ಳ ವೀರಪ್ಪನ್ ನ ಅತ್ಯಂತ ಸುರಕ್ಷಿತ ಅಡುಗುತಾಣವಾಗಿತ್ತು. ಸಮುದ್ರಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಬೆಟ್ಟಕ್ಕೆ ಈಗ ಭೇಟಿ ನೀಡಿ ಮಹದೇಶ್ವರನ ಕೃಪಾಕಟಾಕ್ಷಕ್ಕೆ ಈಡಾಗಲು ಯಾವುದೇ ಬೆದರಿಕೆಯಿಲ್ಲ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನಲ್ಲಿ ಮಹದೇಶ್ವರ ದೇವಸ್ಥಾನವಿದೆ. ಮಲೆಮಹದೇಶ್ವರ ಬೆಟ್ಟದ ಬಳಿ ಇತರ ಸಣ್ಣ 77 ಬೆಟ್ಟಗಳಿವೆ ಎಂದು ಹೇಳಲಾಗಿದೆ.
ಮಾರ್ಗದರ್ಶನ...»
ನಂದಿ ಬೆಟ್ಟ : ಬೆಂಗಳೂರಿನಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ನಿಸರ್ಗಧಾಮ ಪ್ರೇಮಿಗಳ ಫೆವರಿಟ್ ಸ್ಥಳವಾಗಿ ಪರಿವರ್ತಿತವಾಗಿದೆ. ಅರ್ಕಾವತಿ ನದಿಯ ಉಗಮಸ್ಥಾನವಾಗಿರುವ ರುದ್ರರಮಣೀಯ ನಂದಿ ಹಿಲ್ಸ್ ಮೇಲಿರುವ ಶಿವನ ದೇವಸ್ಥಾನ ಮತ್ತು ಟಿಪ್ಪು ಡ್ರಾಪ್ಸ್ ನೋಡತಕ್ಕ ಸ್ಥಳಗಳು. ಬೆಟ್ಟದ ಮೇಲಿಂದ ಆಕಾಶದಲ್ಲಿ ತೇಲಾಡುವ ಮೋಡದ ಸಾಗರವನ್ನು ನೋಡುವುದು ಆನಂದ. ಈ ಸ್ಥಳವನ್ನು ನೋಡದಿದ್ದವರು ಒಮ್ಮೆ ನೋಡಲೇಬೇಕು. ದಯವಿಟ್ಟು ಬೆಟ್ಟಕ್ಕೆ ಮದಿರೆಯನ್ನು ತೆಗೆದುಕೊಂಡು ಹೋಗಿ ಅದರ ಪಾವಿತ್ರ್ಯವನ್ನು ಹಾಳುಗೆಡವಬೇಡಿ.
ಮಾರ್ಗದರ್ಶನ...»
No comments:
Post a Comment